ಪೋರ್ಟರ್, ಕ್ಯಾತರಿನ್ ಆ್ಯನ್
	1890-1980. ಅಮೆರಿಕದ ಸಣ್ಣ ಕತೆಗಾರ್ತಿ. ಹುಟ್ಟಿದ್ದು ಟೆಕ್ಸಾಸ್ ಪ್ರಾಂತದ ಸ್ಯಾನ್ ಆಂಟೋನಿಯೋದಲ್ಲಿ. ಕಾನ್ವೆಂಟ್ ಶಾಲೆಗಳಲ್ಲಿ ವಿದ್ಯಾಭ್ಯಾಸವಾಯಿತು. ತೀರ ಸಣ್ಣ ವಯಸ್ಸಿನಲ್ಲೇ ಈಕೆ ಕತೆಗಳನ್ನು ಬರೆಯತೊಡಗಿದರೂ ಬರೆದಿಟ್ಟ ಕತೆಗಳನ್ನು ತಾನೇ ವಿಮರ್ಶೆ ಮಾಡಿ ಅವು ಚೆನ್ನಾಗಿಲ್ಲವೆಂದು ಹರಿದುಹಾಕುತ್ತಿದ್ದಳು. ಹೀಗಾಗಿ 30ನೆಯ ವಯಸ್ಸಿನವರೆಗೂ ಈಕೆ ಒಂದು ಕತೆಯನ್ನೂ ಪ್ರಕಟಿಸಲಿಲ್ಲ. ಸಾಹಿತ್ಯದ ಗೀಳು ವಿಪುಲವಾಗಿದ್ದರೂ ಯಾವ ಬರಹಗಾರರ ಪರಿಚಯ ಮಾಡಿಕೊಳ್ಳದೆ, ಯಾರ ಅನುಕರಣೆಯನ್ನೂ ಮಾಡದೆ, ಯಾರ ಪ್ರಭಾವಕ್ಕೂ ಒಳಗಾಗದೇ ತನ್ನ ಬರೆಹವನ್ನು ರೂಪಿಸಿಕೊಂಡವಳು. ವಿಪುಲವಾಗಿ ಇಂಗ್ಲಿಷ್ ಸಾಹಿತ್ಯ ಕೃತಿಗಳನ್ನು ಓದಿದವಳು. ಪತ್ರಿಕೆಗಳಿಗೆ ರಾಜಕೀಯ ಲೇಖನ, ಪುಸ್ತಕ ವಿಮರ್ಶೆ, ಬೇರೆಯವರ ಬರೆಹಗಳನ್ನು ತಿದ್ದಿ ಬರೆದುಕೊಡುವ ಸಂಪಾದನಾ ಕಾರ್ಯ-ಇವುಗಳಿಂದ ಬಂದ ಹಣದಿಂದ ಕೆಲಕಾಲ ತನ್ನ ಜೀವನ ನಡೆಸಿದಳು. 

	ಈಕೆಯ ಮೊದಲ ಕತೆ ಪ್ರಕಟವಾದುದೇ ತಡ ಶ್ರೇಷ್ಠ ಸಣ್ಣ ಕತೆಗಾರ್ತಿಯೆಂದು ಹೆಸರಾದಳು. 1931ರಲ್ಲಿ ಗ್ಯುಗೆನ್‍ಹೀಮ್ ವಿದೇಶ ವ್ಯಾಸಂಗ ವೇತನದ 1940ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಲೈಬ್ರೆರಿ ಸೊಸೈಟಿಯ ಚಿನ್ನದ ಪದಕವೂ ದೊರಕಿತು. 

	1933ರಲ್ಲಿ ಯೂಜಿನ್ ಪ್ರೆಸ್ಲಿಯೊಂದಿಗೆ ಈಕೆಯ ಮದುವೆಯಾಯಿತು. ಐದು ವರ್ಷಗಳಲ್ಲೇ ವಿವಾಹ ವಿಚ್ಛೇದನ ಪಡೆದು ಲೂಸಿಯಾನ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಆಲ್ಬರ್ಟ್ ರಸೆಲ್ ಎಸ್ರ್ಕೈನ್‍ನನ್ನು ಮದುವೆಯಾದಳು. ಇಬ್ಬರೂ ಈಗ ಬೇಟನ್‍ರೂಜ್‍ನಲ್ಲಿ ನೆಲೆಸಿದರು. 1942ರಲ್ಲಿ ಪಿಕೆರಸ್ಕ್ ಮಾದರಿಯ ದಿ ಇಚಿಂಗ್ ಪ್ಯಾರಟ್ ಎಂಬ ಕಾದಂಬರಿಯನ್ನು ಪ್ರಕಟಿಸಿದಳು. ಅನೇಕ ಸಾಹಿತ್ಯ ಪ್ರಶಸ್ತಿ ಸನ್ಮಾನ, ಬಹುಮಾನಗಳನ್ನು ಪಡೆದಿದ್ದಾಳೆ. ಪ್ರಕಟಗೊಂಡ ಕೃತಿಗಳು ಕೇವಲ ಬೆರಳೆಣಿಕೆಯವಾದರೂ ಕೀರ್ತಿಯಲ್ಲಿ ಹಿರಿಯ ಸಾಹಿತಿ ಎನಿಸಿಕೊಂಡಿದ್ದಾಳೆ.

	ಸಾಹಿತ್ಯದೊಂದಿಗೆ ಸಂಗೀತ, ಪಾಕ ಕಲೆ, ಇವು ಈಕೆಗೆ ಪ್ರಿಯ. 1933ರಲ್ಲಿ ಹಳೆಯ ಫ್ರೆಂಚ್ ಹಾಡುಗಳನ್ನು ಭಾಷಾಂತರ ಮಾಡಿದಳು. 1962ರಲ್ಲಿ ಪ್ರಕಟವಾದ ಈಕೆಯ ಕೃತಿ ಷಿಪ್ ಆಫ್ ಫೂಲ್ಸ್ ದೇಶ ವಿದೇಶಗಳಲ್ಲಿ ಕೀರ್ತಿ ಪಡೆಯಿತು.

	ಈಕೆಯದು ಅಸದೃಶ್ಯವಾದ ಶೈಲಿ, ಸನ್ನಿವೇಶಕ್ಕೆ ತಕ್ಕಂತೆ ಶೈಲಿಯನ್ನು ಮಾರ್ಪಡಿಸಿ ಬಳಸುವುದು ಈಕೆಯ ವೈಶಿಷ್ಟ್ಯ. ಚಿತ್ರಿಸುವ ಪಾತ್ರದ ಮನಸ್ಸನ್ನೇ ಬಿಚ್ಚಿಡುವ ಹಾಗೆ ನಿರೂಪಣೆ. ರಾಜಕೀಯದಲ್ಲಿ ವಾಮಪಕ್ಷದ ಕಡೆ ಒಲವು ತೋರಿದರೂ ಕಲಾ ಪ್ರಪಂಚದಲ್ಲಿ ಶುದ್ಧ ಕಲಾತ್ಮಕ ದೃಷ್ಟಿ. ವಾಸ್ತವ ಘಟನೆಗಳ ಆಧಾರದ ಮೇಲೆ ಕಟ್ಟಿದ ಕತೆಯನ್ನು ನೇರವಾಗಿ ಹೇಳುವ ಮನೋಧರ್ಮ. ಜಾತಿ, ಗುಂಪು, ಹಣಗಳ ಬಗ್ಗೆ ತಿರಸ್ಕಾರ. ಜೀವನದ ಸಂಕೀರ್ಣತೆಯನ್ನು ಸಾಹಿತ್ಯದಲ್ಲಿ ಹಿಡಿಯುವ ಯತ್ನವನ್ನು ಈಕೆ ಯಶಸ್ವಿಯಾಗಿ ಮಾಡಿದ್ದಾಳೆ. ಅರ್ಥಹೀನವಾದ ಆಧುನಿಕ ಜೀವನವನ್ನು ತದ್ವತ್ತಾಗಿ ಚಿತ್ರಿಸಿದ್ದಾಳೆ. ಈಕೆಯ ಆಯ್ದ ಕಥಾ ಸಂಕಲನಕ್ಕೆ 1966ರಲ್ಲಿ ಪುಲಿಟ್ಜರ್ ಬಹುಮಾನ ಬಂತು.

ಈಕೆಯ ಇತರ ಕೃತಿಗಳು: ಫ್ಲವರಿಂಗ್ ಜುಡಾಸ್ (1930); ಹ್ಯಾಸಿಯೆಂಡ್ (1934); ನೂನ್ ವೈನ್ (1937); ಪೇಲ್ ಹಾರ್ಸ್ ಪೇಲ್ ರೈಡರ್ (1939); ನೋ ಸೇಫ್ ಹಾರ್ಬರ್ (1942).				(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ